ಬುಧವಾರ, ಮೇ 14, 2014

ಭೂತ ಕಥೆ


ತುಂಬಾ ಮುದ್ದಾದ ಉದ್ದನೆಯ ಜಡೆಯ ಹುಡುಗಿ ಹೆಸರು ಶುಭ, ಅವಳಿಗೊಬ್ಬಳು ಸಹೋದರಿ ಸುಧಾ , ವಯಸ್ಸಿನಲ್ಲಿ ಎರಡು ವರುಷ ಕಿರಿಯವಳಾದರು ತುಂಬಾ ಜಾಣೆ. ಅವರಿಬ್ಬರೂ ಇರುವುದು ಒಂದು ಪುಟ್ಟ ಹಳ್ಳಿಯಲ್ಲಿ, ತಂದೆ ವ್ಯವಸಾಯ ಮಾಡಿಕೊಂಡು ಇಬ್ಬರು ಮಕ್ಕಳನ್ನ ಹಳ್ಳಿಯಲ್ಲೇ ಓದಿಸುತ್ತಾ ಇದ್ದರು. ಅಮ್ಮ ಮನೆ ಗೆಲಸ ಮಾಡಿಕೊಂಡು ಇರುತ್ತಾ ಇದ್ದರು.  ಮನೆಗೂ ಶಾಲೆಗೂ ೧೦-೧೫ ನಿಮಿಷ ದಾರಿ, ಅಕ್ಕ ತಂಗಿ ಜೊತೆಗೂಡಿಯೇ ಶಾಲೆಗೆ ಹೋಗಿ ಬರುತ್ತಿದ್ದರು. ತುಂಬಾ ಹಳ್ಳಿಯಾದ್ದರಿಂದ ಬಸ್ಸು,ಆಟೋ ವ್ಯವಸ್ಥೆ ಇದ್ದಿರಲಿಲ್ಲ. ಎಲ್ಲಿಗೆ ಹೋಕಬೇಕಾದರು ಕಾಲುನಡಿಗೆಯಲ್ಲೇ ಹೋಗಬೇಕಾಗಿತ್ತು. ಸಂಜೆ ೫ ಗಂಟೆಗೆ ಶಾಲೆ ಮುಗಿಸಿಕೊಂಡು ಅಕ್ಕತಂಗಿಯರು ಮಾತಾಡುತ್ತ ಹರಟುತ್ತಾ ಮನೆ ತಲುಪುವ ಹೊತ್ತಿಗೆ ಗಂಟೆ ೬ ಆಗುತಿತ್ತು. ಮನೆಗೆ ಬಂದು ಕೈಕಾಲು ಮುಖ ತೊಳೆದು ಅಮ್ಮ ಮಾಡಿಟ್ಟ ತಿಂಡಿಯನ್ನು ತಿಂದು ಶುಭ ಹೊಲದ ಕಡೆಗೆ ನಡೆಯುತ್ತಿದ್ದಳು ಅಪ್ಪನಿಗೆ ಅಲ್ಪ ಸ್ವಲ್ಪ ತನ್ನ ಕೈಲಾದಷ್ಟು ಸಹಾಯ ಮಾಡಿ ಕೊಡುತ್ತಿದ್ದಳು, ತರಕಾರಿ ಗಿಡಗಳಿಗೆ ನೀರು, ಗೊಬ್ಬರ ಹಾಕುವುದು, ಬೆಳೆದ ತರಕಾರಿಗಳನ್ನ ಕೀಳುವುದು, ಇನ್ನಿತರ ಸಣ್ಣ ಪುಟ್ಟ ಸಹಾಯ ಮಾಡಿಕೊಡುತ್ತಿದ್ದಳು. ಸ್ವಲ್ಪ ಸಮಯದ ನಂತರ ತಂದೆ ಮಗಳು ಇಬ್ಬರು ಮನೆಗೆ ಮರಳುತ್ತಿದ್ದಳು. ಇತ್ತ ಸುಧಾ ಅಮ್ಮನ ಜೊತೆಗೂಡಿ ಅಡುಗೆಯ ಕೆಲಸ ಮಾಡಿ ಮುಗಿಸುತ್ತಿದ್ದಳು. ಮಲಗುವ ಮುನ್ನ ಇಬ್ಬರು ಸ್ವಲ್ಪ ಪಟ್ಯ ಪುಸ್ತಕವನ್ನ ಓದಿಕೊಂಡು ಆ ದಿನದ ಅಧ್ಯಯನ ಮಾಡಿಕೊಂಡು  ಮಲಗುತ್ತಿದ್ದರು.

ಬೆಳಿಗ್ಗೆ ಬೇಗನೆ ಎದ್ದು ಅಮ್ಮ ಅಪ್ಪನಿಗೆ ಸಹಾಯ ಮಾಡಿಕೊಟ್ಟು ಇಬ್ಬರು ಶಾಲೆಗೆ ಹೊರಡುತ್ತಿದ್ದರು. ಶಾಲೆಗೆ ಹೋಗೋ ದಾರಿಯಲ್ಲಿ ಒಂದು ಚಿಕ್ಕ ಕೆರೆಯನ್ನು ಹಾದು ಹೋಗಬೇಕಿತ್ತು. ಸಾದಾರಣ ಆ ಹಳ್ಳಿಯ ಜನರು ಆ ಕೆರೆಯ ಹತ್ತಿರ ಹೋಗುತ್ತಿರಲ್ಲಿಲ್ಲ. ಆಕೆರೆಯು ಅಷ್ಟೊಂದು ಸ್ವಚ್ಛವಾಗಿಯೂರಲಿಲ್ಲ. ಪಾಚಿಯಿಂದ ಕೂಡಿತ್ತು ಆಚೆ ಈಚೆ ಹೋದಾಗೆಲ್ಲ ಕೆಲವಳ ನೊಣ, ಸೊಳ್ಳೆಗಳ ಸಪ್ತಸ್ವರವೇ ಕೇಳಿಬರುತ್ತಿತ್ತು ಎಲ್ಲರಿಗೂ. ಯಾರೂ ಅದನ್ನ ಸ್ವಚ್ಛಗೊಳಿಸುವ ಗೋಜಿಗೆ ಹೋಗುತ್ತಿರಲಿಲ್ಲ, ಯಾಕೆಂದರೆ ಅದು ಕೇವಲ ಸಾಮಾನ್ಯ ಕೆರೆ ಆಗಿದ್ದಿರಲಿಲ್ಲ ”ಭೂತದ ಕೆರೆ”ಯೆಂದು ಹೆಸರಿತ್ತು. ಆ ಕೆರೆಯಲ್ಲಿ ಕೆಲವು ವರುಷಗಳ ಹಿಂದೆ ವಯಸ್ಸಿಗೆ ಬಂದ ಹೆಣ್ಣೊಬ್ಬಳು ಕೆರೆಯಲ್ಲಿ ಬಿದ್ದು ಸತ್ತಿದ್ದಳು. ಎಳೆ ವಯಸ್ಸಿನ ಮದುವೆ ಆಗದ ಹುಡುಗ/ಹುಡುಗಿಯರು ಆತ್ಮಹತ್ಯೆ ಮಾಡಿಕೊಂಡರೆ ಅವರ ಪ್ರೆತಾತ್ಮವು ಯಾರನ್ನಾದರು ಕಾಡುತ್ತದೆ ಎಂಬ ನಂಬಿಕೆ ಊರ ಜನರಲ್ಲಿದ್ದಿತ್ತು. ಆದ್ದರಿಂದ ಯಾರು ಅಷ್ಟು ಕೆರೆಯ ಬದಿ ಸುಳಿಯುತ್ತಿರಲಿಲ್ಲ. ಆದರೆ ಶುಭ ಮತ್ತು ಸುಧ ಮಾತ್ರ ಅಪ್ಪ ಅಮ್ಮನ ಮಾತು ಮೀರಿ ಆ ದಾರಿಯಿಂದಲೇ ಶಾಲೆಗೆ ದಿನ ಹೋಗುತ್ತಿದ್ದರು. ಸಂಜೆಯೂ ಶಾಲೆಯಿಂದ ಹರಟುತ್ತಾ, ಆಟ ಆಡಿಕೊಂಡು ಒಂದಷ್ಟು ಸಣ್ಣ ಸಣ್ಣ ಕಲ್ಲುಗಳನ್ನ ಆ ಭೂತದ ಕೆರೆಗೆ ಎಸೆದು ಕೊಂಚ ಭಯದಿಂದಲೂ ಹೆದರಿ ನಗುತ್ತ ಓಡೋಡಿಕೊಂಡು ಮನೆಗೆ ಬರುತ್ತಿದ್ದರು.

ಒಂದು ದಿನ ಸುಧಾಳಿಗೆ ಮೈ ಹುಷಾರು ತಪ್ಪಿದ್ದರಿಂದ ಶಾಲೆಗೆ ಅವಳು ಹೋಗಿರಲಿಲ್ಲ. ಶುಭಾ ಮಾತ್ರ ಹೋಗಿದ್ದಳು, ಸಂಜೆ ಬರುವ ಹೊತ್ತಿಗೆ ತುಂಬಾ ಮಳೆ ಬಂದದ್ದರಿಂದ ಒಂದು ಕಡೆ ಸ್ವಲ್ಪ ಹೊತ್ತು ನಿತ್ತು, ಮಳೆ ಕಡಿಮೆ ಆದ ಮೇಲೆ ಮನೆಯ ದಾರಿ ಹಿಡಿದಳು. ಯಥಾ ಪ್ರಕಾರ ಆ ಭೂತದ ಕೆರೆಯ ದಾರಿಯಲ್ಲೇ ಬರುತ್ತಿರುವಾಗ ಯಾಕೋ ಒಂದು ರೀತಿಯ ಶಬ್ಧ ಕೇಳಿಸ ತೊಡಗಿತು. ಮೊದಲೇ  ಕತ್ತಲೆಯಾಗಿದ್ದರಿಂದ ಹೆದರಿಕೆ ಇನ್ನಷ್ಟು ಹೆಚ್ಚಿ ಎದೆಯ ಭಡಿತವೂ ಹೆಚ್ಚ ತೊಡಗಿತು. ಬೇಗ ಬೇಗನೆ ನಡೆಯ ತೊಡಗಿದಳು, ಅವಳ ಅವಸರ ಅವಸರ ಹೆಜ್ಜೆಗೆ ಅಷ್ಟೇ ಅವಸರವಾಗಿ ಯಾರೋ ಹಿಂಬಾಲಿಸಿದ ಅರಿವಾಯಿತು. ಮೊದಲೇ ಸುರಿಯುತ್ತಿದ್ದ ಮಳೆಗೆ ಬೇಗ ಓಡಲು ಅವಳಿಂದ ಆಗಲಿಲ್ಲ. ಯಾರಿರ ಬಹುದೆಂದು ಹಿಂದಿರುಗಿ ನೋಡುವ ಹುಚ್ಚು ಸಾಹಸ ಬೇರೆ ಅವಳು ಮಾಡಲಿಲ್ಲ. ಹಿಂದಿರುಗಿ ನೋಡಬೇಕು ಎಂದಾಗಲೆಲ್ಲ ಅವಳಿಗೆ ವಿಕ್ರಮ ಬೇತಾಳನ ಕಥೆ ನೆನಪಾಗುತಿತ್ತು. ಮಳೆಯಲ್ಲೂ ಬೆವತು ಆ ದಿನ ಮಾತ್ರ ಓಡೋಡಿ ಮನೆ ಸೇರಿದ್ದಳು. ಹೆತ್ತವರ ಹತ್ತಿರ ಹೇಳಬೇಕು ಎಂದು ಕೊಂಡರೆ ಎಲ್ಲಿ ಶಾಲೆಗೆ ಕಳುಹಿಸದೆ ಮನೆಯಲ್ಲೇ ಕೂರಿಸುತ್ತಾರೆ ಅಂದುಕೊಂಡು ಹೇಳಲೇ ಇಲ್ಲ.

ಮಾರನೆಯದಿನ ಸುಧಾ ತಕ್ಕ ಮಟ್ಟಿಗೆ ಚೇತರಿಸಿಕೊಂಡಳಾದರೂ, ಶಾಲೆಗೆ ನಡೆದುಕೊಂಡು ಹೋಗುವಷ್ಟು ಸುಧಾರಿಸಿ ಕೊಂಡಿರಲಿಲ್ಲ. ಆದರೆ ಶುಭಾಳಿಗೆ ಒಬ್ಬಳೇ ಹೋಗಲು ಭಯ, ಅಪ್ಪ ಅಮ್ಮನಲ್ಲಿ ನಿನ್ನೆಯ ಘಟನೆ ಬಗ್ಗೆ ಹೇಳಿದರೆ ಅವರೂ ಹೆದರಿ  ಶಾಲೆಗೆ ಕಳುಹಿಸದಿದ್ದರೆ ಎಂಬ ಭಯ, ಬೇರೆ ದಾರಿಯಲ್ಲಿ ಹೋಗಣವೆಂದರೆ ಕಾಡುದಾರಿ, ಇದಕಿಂತಲೂ ಭಯ ಹುಟ್ಟಿಸುವ ದಾರಿ, ಏನು ಮಾಡುವುದು ಎಂದು ಯೋಚಿಸುತ್ತಾ ಹಾಗೆ ಸ್ವಲ್ಪ ಸಮಯ ಮಂಕಾಗಿ ಕುಳಿತಳು.ಆಗಲೇ ಆಚೆಮನೆ ಸುಬ್ಬಣ್ಣ ಬಂದು ಅವನ ಮನೆಯ ಎಮ್ಮೆ ಮೇಯುತ್ತಿರುವಾಗ  ಇದ್ದಕ್ಕಿದ್ದಂತೆ ಅರಚಿ ಕಾಲು ಜಾರಿ ಆ ಕೆರೆಗೆ ಬಿದ್ದು ಮುಳುಗಿ ಸತ್ತು ಹೋಯಿತು , ಪಕ್ಕದ ಹಳ್ಳಿಯಿಂದ ಬೇರೆ ಇಬ್ಬರನ್ನು ಕರೆಸಿ ಎಮ್ಮೆಯನ್ನು ಕೆರೆಯಿಂದ ಎತ್ತಲಾಯಿತು ಎಂದು ಶುಭಾಳ ತಂದೆಯಲ್ಲಿ ಬೇಸರದಿಂದ ಸುಬ್ಬಣ್ಣ ಹೇಳಿಕೊಳ್ಳುತ್ತಿದ್ದದ್ದು ಶುಭಾಳ ಕಿವಿಗೆ ಬಿತ್ತು. ಮೊದಲೇ ಆ ದಿನ ಶಾಲೆಗೆ ಹೋಗಲು ಹೆದರಿದ್ದ ಶುಭಾಳಿಗೆ, ಆ ಎಮ್ಮೆಯು ಸತ್ತ ಸುದ್ದಿಯ ಚಳಿ ಜ್ವರವೇ ಬರಿಸಿತು. ಇದನ್ನು ಗಮನಿಸಿದ ಅವಳಮ್ಮ, ಇವಳಿಗೂ ಸುಧಾಳಿಂದ ಜ್ವರದ ಸೋಂಕು ತಗಲಿರಬಹುದೆಂದು ಆ ದಿನ ಶುಭಾಳನ್ನು ಕೂಡ ಶಾಲೆಗೆ ಕಳುಹಿಸಲಿಲ್ಲ. ಅಬ್ಬಾ! ಅಷ್ಟೆ ಬೇಕಾಗಿದ್ದಿತ್ತು ಶುಭಾಗೆ. ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಬೇಕಿತ್ತು ಆದಿನದ ಮಟ್ಟಿಗೆ ಅವಳಿಗೆ. ಆಡಿನ ಹೇಗೋ ಸಂಜೆಯ ತನಕ ನಿರಾತಂಕದಿಂದ ಸಮಯ ಕಳೆದಳು, ರಾತ್ರಿ ಆಗುತ್ತಿದ್ದಾಗೆ ಮರುದಿನದ ಚಿಂತೆ ಕಾಡತೊಡಗಿತು. ಆದರೂ ತಂಗಿ ಇರುವಳು ತನ್ನ ಜೊತೆ ಎನ್ನೋ ಒಂದು ಚಿಕ್ಕ ಸಮಾಧಾನ ಮನಸ್ಸಿಗೆ. ಏನೋ ಒಂದು ಧೈರ್ಯ  ತಂದುಕೊಂಡು ನಿದ್ರಿಸಿದಳು.

ಬೆಳಿಗ್ಗೆ ಪ್ರತಿದಿನದ ಹಾಗೆ ಹಾಸಿಗೆಯಿಂದ ಎದ್ದಳು, ಏಳಬೇಕಾದರೆ ತಾನು ಹಾಕಿಕೊಂಡಿದ್ದ  ಸ್ಕರ್ಟ್ ಒದ್ದೆ ಒದ್ದೆ. ದಿಡೀರನೆ ತಾನು ಮಲಗಿದ್ದ ಚಾಪೆಯನ್ನು ಮುಟ್ಟಿ ನೋಡಿದಳು. ಅದೂ ಒದ್ದೆಯಾಗಿತ್ತು. ಅಯ್ಯೋ! ಅಮ್ಮನಿಗೆ ಗೊತ್ತಾದರೆ ಬಯ್ಯುತ್ತಾರೆ ಅಂತ ಹೇಳದೆ ಹಾಗೆ ತಾನು ಮಲಗಿದ್ದ ಚಾಪೆ ಮತ್ತು ಹೊದಿಕೆಯನ್ನ ಒಗೆದು ಹಾಕಿದಳು. ಅಮ್ಮ ನೋಡಿ ಕೇಳಿದ್ದಕ್ಕೆ  ಒಗೆದು ತುಂಬಾ ದಿನವಾಗಿತ್ತಲ್ಲ, ಅದಕ್ಕಾಗಿಯೇ ಬೇಗ ಒಗೆದು ಹಾಕಿ ಶಾಲೆಗೆ ಹೊರಡೋಣ ಅಂತ ಎಂದುಕೊಂಡೆ ಅಂತ ಸುಳ್ಳು ಹೇಳಿದಳು ಅಮ್ಮನಲ್ಲಿ.

ಅಕ್ಕ ತಂಗಿ ಇಬ್ಬರು ಆಡಿನ ಶಾಲೆಗೆ ಹೊರಟರು, ಆ ದಿನ ಸ್ವಲ್ಪ ಮೋಡ ಮೋಡ ಇದ್ದಿದ್ದರಿಂದ ಮಳೆಬರಬಹುದೇನೋ ಅಂತ ಅಂದುಕೊಂಡು ಕೊಂಚ ಬೇಗನೆ ಇಬ್ಬರು ಮನೆಯಿಂದ ಶಾಲೆಗೆ ಹೊರಟರು. ಮೊನ್ನೆ ಸಂಜೆ ನಡೆದ ಘಟನೆಯನ್ನ ಸುಧಾಳಿಗೆ ಹೇಳಿದರೆ ಎಲ್ಲಿ ಹೆದರುವಳೋ ಅಂತಂದುಕೊಂಡು ಹೇಳದೆ ಗಂಟಲೊಳಗೆ ವಿಚಾರವನ್ನ ಅದುಮಿಟ್ಟುಕೊಂಡಳು. ಭಯದಲ್ಲೂ ತಂಗಿಯೊಂದಿಗೆ ಹರಟುತ್ತಾ ಅಂತೂ ಇಂತೂ ಬೆಳಿಗ್ಗೆ ಶಾಲೆಗೆ ಸೇರಿದರು.
ಶಾಲೆ ಮುಗಿಸಿ ಸಂಜೆ ಮನೆಗೆ ಬರುವಾಗ ಮೊನ್ನೆ ತರಹದ ಚಿರಿಪಿರಿ ಮಳೆ, ಎದೆಯ ಭಡಿತ ಕಿವಿಗೆ ಕೆಲೋವಷ್ಟು ಗಟ್ಟಿ ಬಡಿದುಕೊಂಡಂತೆ ಅಬಾಸ. ಸುಧಾಳ ಕೈ ಹಿಡಿದುಕೊಂಡು ಕೊಂಚ ಬೇಗ ಬೇಗನೆ ಹೆಜ್ಜೆ ಇಡುತ್ತಿದ್ದಾಳೆ ಶುಭ. ಸುಧಾ  ನಿಧಾನವಾಗಿ ಚಲಿಸು ಎಂದರು ಕೇಳಿಸುತ್ತಿಲ್ಲ ಅವಳ ಮಾತು ಶುಭಾಳ ಕಿವಿಗೆ. ಇವಳು ಮಾತ್ರ ಬಿರುಸಾಗಿ ನಡೆದುಕೊಂಡು ಹೋಗುತ್ತಿದ್ದಾಳೆ. ಏಕೆಂದರೆ, ಶುಭಾಳ ಹಿಂದೆ ಅಷ್ಟೇ ರಭಸವಾಗಿ ಯಾರೋ ಹಿಂಬಾಲಿಸಿದಂತೆ ಆಯಿತು. ಆದರೆ ಆ ಭಯ ಕೇವಲ ಇವಳಿಗೆ ಮಾತ್ರ ಕಾಡುತ್ತಿದೆ ಎಂಬ ಅರಿವೂ ಆಯಿತು. ಸುಧಾ ಮಾತ್ರ ಚಿಂತೆಯಿಲ್ಲದೆ ಏನೂ ಹೇಳದೆ ನನ್ನ ಕೈ ಹಿಡಿದು ಬರುತ್ತಿದ್ದಾಳೆ. ಹಾಗಾದರೆ ಯಾರು ನನ್ನ ಹಿಂಬಾಲಿಸುತ್ತಿಲ್ಲವೇ, ಇದು ಕೇವಲ ನನ್ನ ಭ್ರಮೆಯೇ ಎಂದು ಆಲೋಚಿಸ ತೊಡಗಿದಳು. ಏನೆ ಆಗಲಿ ಎಂದು ಧೈರ್ಯವಾಗಿ ಸುಧಾಳಲ್ಲಿ ನಡೆಯುತ್ತಲೇ, “ಯಾರಾದರು ನಮ್ಮನ್ನ ಹಿಂದೆ ಬರುತ್ತಿದ್ದಾರೆಯ” ಎಂದು ಕೇಳಿದಳು.ಸುಧಾ ಮೆಲ್ಲನೆ ಹಿಂದಿರುಗಿ ಯಾರು ಇಲ್ಲವಲ್ಲ ಎಂದು ನಿರ್ಭಯದಿಂದ ಹೇಳಿದಳು. ಆದರೆ ಸುಧಾಳ ಮಾತು ನಂಬಲಾಗಲಿಲ್ಲ, ಹಾಗಂತ ನಂಬದೆ ಇರಲು ಸಾದ್ಯವಿರಲಿಲ್ಲ ಅವಳಿಗೆ. “ಇಲ್ಲ ನೋಡು ಟಪ್ ಟಪ್ ಅಂತ ಹೆಜ್ಜೆ ಸಪ್ಪಳ ಕೇಳಿಸುತ್ತಿದೆ ನನ್ನ ಹಿಂದ”’ ನನಗೆ ಎಂದು ಭಯದಿಂದ ಮೊನ್ನೆಯ ಘಟನೆಯನ್ನು ತಂಗಿಯಲ್ಲಿ ಹೇಳಿಕೊಂಡಳು. ಅದಕ್ಕೆ ಸುಧಾಳು ಗಟ್ಟಿಯಾಗಿ ನಗುತ್ತಾ, ಶುಭಾಳ ಕೈ ಹಿಡಿದು “ ಅಕ್ಕಾ ಮಳೆಯ ನೀರಿನಿಂದ  ಹವಾಯಿ ಚಪ್ಪಲಿ ನಿನ್ನ ಕಾಲಿಗೆ ತಗುಲಿ ಮಾಡುತ್ತಿರುವ ಸಪ್ಪಳ ಅದು ಎಂದು ನಗುತ್ತಾ ಹೇಳಿದಾಗಲೇ, ಶುಭಾಳು ನಾಚಿಕೆಯಿಂದ ತಂಗಿಯ ಮುಖ ನೋಡಿ ಮುಗುಳ್ ನಕ್ಕಿದ್ದು. ಅಷ್ಟರಲ್ಲಿ ಮನೆಯನ್ನು ನಗುತ್ತ ಇಬ್ಬರು ತಲುಪಿದ್ದರು.

ಗುರುವಾರ, ಏಪ್ರಿಲ್ 10, 2014

ಅಯ್ಯೋ!!!! ಅದಿನ್ನೂ ಮಗು .... ಪಾಪ ಅದಕ್ಕೇನು ಗೊತ್ತಾಗತ್ತೆ?.


*ಏನಾದ್ರು ಬೇಕು ಅಂದ್ರೆ ಜೋರಾಗಿ ಅಳಬೇಕು
ಅತ್ತಾಗ ಬೇಕಾದದ್ದು ಕೊಡುತ್ತಾರೆ,
ಅಷ್ಟೊಂದು ಅತ್ತು ಹಠ ಮಾಡಬೇಕು
ಅಂತ ಗೊತ್ತಾಗತ್ತೆ,ಆದರೂ......
ನಾವು ಅಂದುಕೊಳ್ಳುವುದು ಮಾತ್ರ...
ಅದಿನ್ನೂ ಮಗು.....ಪಾಪ ಅದಕ್ಕೇನು ಗೊತ್ತಾಗತ್ತೆ?

* ದಿನಾಲು Cereal ತಿನ್ನೋ ಮಗು
ಮಾರನೆ ದಿನ ದೋಸೆ ರುಚಿ ನೋಡಿ
Cereal ವ್ಯಾ.. ಅಂತ ಬೇಡ ಅಂತ
ಅನ್ನೋದಕ್ಕೆ ಗೊತ್ತಾಗತ್ತೆ, ಆದರೂ....
ನಾವು ಅಂದುಕೊಳ್ಳುವುದು ಮಾತ್ರ...
ಅದಿನ್ನೂ ಮಗು.....ಪಾಪ ಅದಕ್ಕೇನು ಗೊತ್ತಾಗತ್ತೆ?

*ಅಮ್ಮ ಬೈದಾಗ ಎಂದೂ ಅಳದಿದ್ದ ಮಗು
ಅಪ್ಪನ ಮುಂದೆ ಬೈದಾಗ ಮಾತ್ರ
ನಾಚಿಕೆ ಆಗಿ ಉಸಿರು ಕಟ್ಟುವಂತೆ ಅಳಬೇಕು
ಅಂತ ಗೊತ್ತಾಗತ್ತೆ,ಆದರೂ....
ನಾವು ಅಂದುಕೊಳ್ಳುವುದು ಮಾತ್ರ...
ಅದಿನ್ನೂ ಮಗು.....ಪಾಪ ಅದಕ್ಕೇನು ಗೊತ್ತಾಗತ್ತೆ?

*ಹೊಡೆದಾಗ, ಕಚ್ಚಿದಾಗ, ಚಿವುಟಿದಾಗ
ನೋವು ಆಗತ್ತೆ ಅಂತ ಗೊತ್ತಿದ್ದರೂ...
ನೋವು ಮಾಡಿ ನೋವಾಯಿತಾ ಅಮ್ಮಾ
ಅಂತ ಕೇಳೋದಕ್ಕೆ ಗೊತ್ತಾಗತ್ತೆ,ಆದರೂ....
ನಾವು ಅಂದುಕೊಳ್ಳುವುದು ಮಾತ್ರ...
ಅದಿನ್ನೂ ಮಗು.....ಪಾಪ ಅದಕ್ಕೇನು ಗೊತ್ತಾಗತ್ತೆ?

*ಊಟ ಮಾಡಿದ ಮೇಲೆ ಚಾಕಲೇಟು
ಕೊಡುವೆ ಅಂತ ಹೇಳಿದ ಮಾತು,
ಊಟವಾದ ನಂತರ ಕೇಳಬೇಕು
ಅಂತ ಗೊತ್ತಾಗತ್ತೆ, ಅದರೂ....
ನಾವು ಅಂದುಕೊಳ್ಳುವುದು ಮಾತ್ರ...
ಅದಿನ್ನೂ ಮಗು.....ಪಾಪ ಅದಕ್ಕೇನು ಗೊತ್ತಾಗತ್ತೆ?

*ಉಪ್ಪಿನಕಾಯಿ ತಿಂದು ಖಾರ ಆಗತ್ತೆ ಅಂತ ಗೊತ್ತಿದ್ದರೂ
ಪದೇ ಪದೇ ಕದ್ದು ಉಪ್ಪಿನಕಾಯಿ ತಿಂದು
ತುಂಬಾ ಖಾರ ನೀರು ಕೊಡು
ಅಂತ ಅನ್ನೋದಕ್ಕೆ ಗೊತ್ತಾಗತ್ತೆ,ಆದರೂ....
ನಾವು ಅಂದುಕೊಳ್ಳುವುದು ಮಾತ್ರ...
ಅದಿನ್ನೂ ಮಗು.....ಪಾಪ ಅದಕ್ಕೇನು ಗೊತ್ತಾಗತ್ತೆ?

 *ಅಪ್ಪ ಬೆನ್ನು ನೋವು ಅಂತ ಮಲಗಿದಾಗ
ತಾನು ಅವರ ಬಳಿ ಹೋಗಿ ಮಲಗಿಕೊಂಡು,
ಬೆನ್ನು ನೋವು, ಬೆನ್ನು ಅಮುಕು,
ಅಂತ ಅನ್ನೋದಕ್ಕೆ ಗೊತ್ತಾಗತ್ತೆ,ಆದರೂ....
ನಾವು ಅಂದುಕೊಳ್ಳುವುದು ಮಾತ್ರ...
ಅದಿನ್ನೂ ಮಗು.....ಪಾಪ ಅದಕ್ಕೇನು ಗೊತ್ತಾಗತ್ತೆ?

*ಅಪ್ಪ,ಅಮ್ಮನಿಗೆ ಏನೆಲ್ಲಾ ಹೇಳುತ್ತಾರೆ
ಅದನ್ನ ಅದೇತರಹ ನಕಲಿ ಮಾಡಿ
ಅಮ್ಮನಿಗೆ ಹೇಳಿ, ಕಣ್ಣು ಮಿಟುಕಿಸಿ,
ಹೋಗೋದಕ್ಕೆ ಗೊತ್ತಾಗತ್ತೆ, ಅದರೂ....
ನಾವು ಅಂದುಕೊಳ್ಳುವುದು ಮಾತ್ರ...
ಅದಿನ್ನೂ ಮಗು.....ಪಾಪ ಅದಕ್ಕೇನು ಗೊತ್ತಾಗತ್ತೆ?

*ತಾನು ಮಾಡಿದ ತಪ್ಪು ಹೇಳದೆ                            
ಅಮ್ಮ ಹೊಡೆದಳು,ಬೈದಳು ಅಂತ
ಅಪ್ಪನಲ್ಲಿ ಕಣ್ಣೀರಿಟ್ಟು ಚಾಡಿ ಹೇಳಬೇಕು
ಅಂತ ಗೊತ್ತಾಗತ್ತೆ,ಆದರೂ......
ನಾವು ಅಂದುಕೊಳ್ಳುವುದು ಮಾತ್ರ...
ಅದಿನ್ನೂ ಮಗು.....ಪಾಪ ಅದಕ್ಕೇನು ಗೊತ್ತಾಗತ್ತೆ?

ನೀ ಏನೆ ಮಾಡಿದರು ಅದು ಮುದ್ದು ಮುದ್ದಾಗಿರುತ್ತದೆ. ನಿನ್ನ ತುಂಟ ತರಲೆಗಳು ಆನಂದ ಕೊಡುತ್ತದೆ, ನೀ ನನ್ನ ನಗು, ನೀ ನನ್ನ ಕನಸು, ನೀ ನನ್ನ ಜೀವ, ನೀನೆ ನನ್ನ ಪ್ರಪಂಚ.